ಹಿತ್ತಾಳೆ
	ತಾಮ್ರ ಮತ್ತು ಸತುವು ಪ್ರಧಾನ ಘಟಕಗಳಾಗಿರುವ ಮಿಶ್ರಲೋಹ (ಬ್ರಾಸ್). ಪುರಾತನರು ಕಂಚನ್ನು, ಅರ್ಥತ್ ತಾಮ್ರ ಮತ್ತು ತವರದ ಮಿಶ್ರಲೋಹವನ್ನೇ ಹಿತ್ತಾಳೆ ಎನ್ನುತ್ತಿದ್ದರು. ಹಿತ್ತಾಳೆ ತಯಾರಿಯ ಆಧುನಿಕ ವಿಧಾನಕ್ಕೆ ಜೇಮ್ಸ್ ಎಮರ್ಸನ್ ಏಕಸ್ವ (ಪೇಟೆಂಟ್) ಪಡೆದ (1781). 

	ಸಾಮಾನ್ಯ ಹಿತ್ತಾಳೆ ತಾಮ್ರಕ್ಕಿಂತ ಕಠಿಣ, ತನ್ಯ ಮತ್ತು ಪತ್ರಶೀಲ. ಪತ್ರಶೀಲತೆ ಹಿತ್ತಾಳೆಯಲ್ಲಿರುವ ಸತುವಿನ ಪ್ರಮಾಣ ಅವಲಂಬಿಸಿದೆ. ಸು. 37%ಕ್ಕಿಂತ ಕಡಿಮೆ ಸತುವು ಇರುವ ಹಿತ್ತಾಳೆ  ತಣ್ಣಗಿರುವಾಗಲೂ ಕಾರ್ಯಸಾಧ್ಯ (ವರ್ಕೆಬಲ್), 37-47% ಇರುವಂಥದ್ದು ಬಿಸಿಯಾಗಿರುವಾಗ ಮಾತ್ರ ಕಾರ್ಯಸಾಧ್ಯ, ಇನ್ನೂ ಹೆಚ್ಚು ಇರುವಂಥದ್ದು ಎಂದೂ ಕಾರ್ಯಸಾಧ್ಯವಲ್ಲ. ಎರಡನೆಯದು ಮೊದಲನೆಯದಕ್ಕಿಂತ ಕಡಿಮೆ ತನ್ಯವಾದರೂ ಹೆಚ್ಚು ಬಲಯುತ. ಕೊನೆಯದೇ ಭಿದುರ ಬಿಳಿ ಹಿತ್ತಾಳೆ.

	75-85% ತಾಮ್ರವಿರುವ ಹಿತ್ತಾಳೆಯ ಬಣ್ಣ ಕೆಂಪುಮಿಶ್ರಿತ ಚಿನ್ನ, 60-70% ಇರುವುದರದ್ದು ಹಳದಿ. 95% ತಾಮ್ರವಿರುವುದು ಚಿನ್ನದಂತೆ ಕಾಣುವ ಹಿತ್ತಾಳೆ (ಗಿಲ್ಡಿಂಗ್ ಬ್ರಾಸ್). ತಾಮ್ರ ಮತ್ತು ಸತುವು 90:10 ನಿಷ್ಪತ್ತಿಯಲ್ಲಿರುವ ಸಾಮಾನ್ಯ ಹಿತ್ತಾಳೆ, 85:15ರ ಕೆಂಪು ಹಿತ್ತಾಳೆ, 80:20ರ ಕೀಳು (ಲೊ) ಹಿತ್ತಾಳೆ, 70:30ರ ಕಾಡತೂಸು (ಕಾಟ್ರ್ರಿಡ್ಜ್) ಹಿತ್ತಾಳೆ, 66:34ರ ಹಳದಿ ಹಿತ್ತಾಳೆ, 60:40ರ ಮುಂಟ್ಸ್ ಲೋಹ ಮುಂತಾದವು ವಾಣಿಜ್ಯೋದ್ದೇಶದ ವಿಶೇಷ ಹಿತ್ತಾಳೆಗಳು. 

	ಭೌತ ಹಾಗೂ ಯಾಂತ್ರಿಕ ಲಕ್ಷಣಗಳನ್ನು ಸುಧಾರಿಸಲು, ತುಕ್ಕುನಿರೋಧಕತೆ ಹೆಚ್ಚಿಸಲು, ಚರಕಿಯಂತ್ರಕಾರ್ಯ (ಲೇತಿಂಗ್) ಸುಲಭವಾಗಿಸಲು ಅಥವಾ ಬಣ್ಣ ಬದಲಿಸಲು ಹಿತ್ತಾಳೆಗೆ ಬೇರೆ ಧಾತುಗಳನ್ನು ಸೇರಿಸುವುದುಂಟು. ಚರಕಿಯಂತ್ರಕಾರ್ಯ ಸುಲಭವಾಗಿಸುವ ಸೀಸಹಿತ್ತಾಳೆ, ಸಮುದ್ರನೀರಿನಲ್ಲಿಯೂ ಕಳೆಗುಂದದ ತವರಹಿತ್ತಾಳೆ (ನೇವಲ್ ಅಥವಾ ಅಡ್ಮಿರಾಲಿಟಿ ಬ್ರಾಸ್), ಬಲಯುತ ಮತ್ತು ತುಕ್ಕುನಿರೋಧೀ ಅಲ್ಯೂಮಿನಿಯಮ್‍ಹಿತ್ತಾಳೆ ಉದಾಹರಣೆಗಳು.

	ದ್ರವಿತ ತಾಮ್ರಕ್ಕೆ ಸತುವಿನ ಮುದ್ದೆಯನ್ನು ಸೇರಿಸಿ ದೊರೆತ ದ್ರವಮಿಶ್ರಣವನ್ನು ಎರಕ ಹೊಯ್ದು ಅಥವಾ ಕಂಬಿಗಳ (ಬಿಲಿಟ್) ರೂಪದಲ್ಲಿ ಹಿತ್ತಾಳೆ ಉತ್ಪಾದನೆ. ಉತ್ಪಾಟನೆ (ಎಕ್ಸ್‍ಟ್ರೂಶನ್) ಅಥವಾ ಬಿಸಿರೂಪಣೆ ಪರಿಕರ್ಮದಿಂದ ಅನ್ನೀಲಿತ ಕಂಬಿಗಳ ಸಂಸ್ಕರಣೆ.

	ಪಿನ್ನು, ಕಾಡತೂಸಿನ ಕವಚ, ನಲ್ಲಿ, ನೀರ್ಗೊಳವೆ, ಕವಾಟ, ವಿದ್ಯುದುಪಕರಣ, ತಿರುಪುಮೊಳೆ, ಗಡಿಯಾರದ ಭಾಗಗಳು, ಸಂಗೀತ ವಾದ್ಯಗಳು ಮತು ಗೃಹೋಪಯೋಗೀ ಪಾತ್ರೆಗಳು ಮುಂತಾದ ಅನೇಕ ಉಪಯುಕ್ತ ಸಾಮಗ್ರಿಗಳ ತಯಾರಿಕೆಗೆ ಹಿತ್ತಾಳೆ ಆವಶ್ಯಕ. 	
					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		
		(ಎಚ್.ಜಿ.ಎಸ್.)